ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿಗೆ `ಸುಪ್ರೀಂ ತೀರ್ಪು’ ಆಧಾರ.
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ (CM Siddaramaiah) ಮುಡಾ ಹಗರಣ (MUDA Scam) ಸಂಬಂಧ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ (Thawar Chand Gehlot) ಅನುಮತಿ ನೀಡಿರುವುದು ರಾಜ್ಯ ರಾಜಕೀಯ ವಲಯದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದೆ.
ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಕೋರಿ ಟಿಜೆ ಅಬ್ರಾಹಂ, ಸ್ನೇಹಮಯಿ ಕೃಷ್ಣ ಪ್ರದೀಪ್ ಕುಮಾರ್, ದಾಖಲಿಸಿದ್ದ ಅರ್ಜಿಗಳ ಪರಿಶೀಲನೆ ನಡೆಸಿದ ರಾಜ್ಯಪಾಲರು ಆರು ಪುಟಗಳ ಆದೇಶ ಹೊರಡಿಸಿದ್ದಾರೆ. ರಾಜ್ಯಪಾಲರ ಆದೇಶ ಪ್ರತಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೈ ಸೇರಿದೆ.
ದೂರುದಾರರು ರಾಜಭವನಕ್ಕೆ ತೆರಳಿ ಪ್ರಾಸಿಕ್ಯೂಷನ್‌ಗೆ ನೀಡಿರುವ ಅನುಮತಿ ಪತ್ರವನ್ನು ತೆಗೆದುಕೊಂಡು ಹೋಗಿದ್ದಾರೆ. ಇದರಿಂದ ಸಿಎಂಗೆ ಈಗ ಸಂಕಷ್ಟ ಎದುರಾಗಿದೆ. ಸಿಎಂ ರಾಜೀನಾಮೆ ನೀಡಬೇಕಾದ ಸನ್ನಿವೇಶ ಸೃಷ್ಟಿಯಾಗುತ್ತಾ ಎಂಬ ಪ್ರಶ್ನೆ ಎದುರಾಗಿದೆ.ರಾಜ್ಯಪಾಲರ ಆದೇಶ ಪತ್ರದಲ್ಲಿ ಏನಿದೆ?
ಸಿಎಂ ವಿರುದ್ಧದ ದೂರು, ಕಾನೂನು ಅಭಿಪ್ರಾಯ, ಸಂಪುಟ ನಿರ್ಣಯ ಪರಿಶೀಲಿಸಲಾಗಿದ್ದು ಮುಖ್ಯಮಂತ್ರಿಗಳ ವಿರುದ್ಧದ ಆರೋಪದ ವಿಚಾರವಾಗಿ 2 ಬಗೆಯ ಅಭಿಪ್ರಾಯಗಳಿವೆ. ದೂರಿನಲ್ಲಿರುವ ಆರೋಪಗಳನ್ನು ಮೇಲ್ನೋಟಕ್ಕೆ ಪುಷ್ಟೀಕರಿಸುವ ದಾಖಲೆಗಳೂ ಇವೆ. ತನಿಖೆ ಹೇಗಿರಬೇಕು ಎಂಬುದನ್ನು ಆರೋಪಿತ ವ್ಯಕ್ತಿ ನಿರ್ಧರಿಸುವುದು ಕಾನೂನು ಒಪ್ಪಿತವಲ್ಲ.
ಪ್ರಾಸಿಕ್ಯೂಷನ್ ಅನುಮತಿಗೆ `ಸುಪ್ರೀಂ ತೀರ್ಪು’ ಆಧಾರ
2004ರ ಮಧ್ಯಪ್ರದೇಶ ಸರ್ಕಾರ ವರ್ಸಸ್ ವಿಶೇಷ ಪೊಲೀಸ್ ಘಟಕ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ತೀರ್ಪನ್ನು ರಾಜ್ಯಪಾಲರು ಉಲ್ಲೇಖಿಸಿದ್ದಾರೆ. ಇಂತಹ ಪ್ರಕರಣಗಳಲ್ಲಿ ದಾಖಲೆ ಲಭ್ಯವಿದ್ದಾಗಲೂ ರಾಜ್ಯಪಾಲರು ವಿವೇಚನಾ ಅಧಿಕಾರ ಬಳಸದಿದ್ದರೆ ಸರಿ ಆಗುವುದಿಲ್ಲ. ಅಧಿಕಾರದಲ್ಲಿರುವ ಪ್ರಭಾವಿ ವ್ಯಕ್ತಿಗಳ ವಿರುದ್ಧ ಮೇಲ್ನೋಟಕ್ಕೆ ಸಾಕ್ಷ್ಯ ಲಭ್ಯ ಇದ್ದಾಗಲೂ ತನಿಖೆಗೆ ಅನುಮತಿ ನಿರಾಕರಿಸಿದರ ಅದರಿಂದ ಪ್ರಜಾಪ್ರಭುತ್ವ ಅಪಾಯಕ್ಕೆ ಸಿಲುಕುತ್ತದೆ. ತಮ್ಮ ವಿರುದ್ಧ ತನಿಖೆ ನಡೆಸಲು ಅವಕಾಶವೇ ಇಲ್ಲ ಎಂಬ ಭಾವನೆಯಿಂದ ಆಳುವ ಮಂದಿಗೆ ಕಾನೂನು ಉಲ್ಲಂಘಿಸಲು ಪ್ರೇರಣೆ ದೊರೆಯುತ್ತದೆ ಎಂಬ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಉಲ್ಲೇಖಿಸಿದ್ದಾರೆ.