ಅಸ್ಸಾಂನಲ್ಲಿ ಹಳಿ ತಪ್ಪಿದ ಎಕ್ಸ್‌ಪ್ರೆಸ್ ರೈಲಿನ 8 ಬೋಗಿಗಳು
ಅಗರ್ತಲಾ: ತ್ರಿಪುರಾದ ಅಗರ್ತಲಾದಿಂದ (Agartala) ಮುಂಬೈಗೆ (Mumbai) ತೆರಳುತ್ತಿದ್ದ ಎಕ್ಸ್‌ಪ್ರೆಸ್ (Lokmanya Tilak Express) ರೈಲಿನ ಇಂಜಿನ್ ಮತ್ತು 8 ಬೋಗಿಗಳು ಅಸ್ಸಾಂನ ದಿಬೋಲಾಂಗ್ ನಿಲ್ದಾಣದ ಬಳಿ ಹಳಿತಪ್ಪಿವೆ.
12520 ಅಗರ್ತಲಾ-ಲೋಕಮಾನ್ಯ ತಿಲಕ್ ಟರ್ಮಿನಸ್ ಎಕ್ಸ್‌ಪ್ರೆಸ್ ಇಂದು ಬೆಳಿಗ್ಗೆ ಅಗರ್ತಲಾದಿಂದ ಹೊರಟಿತ್ತು. ಅಸ್ಸಾಂನ ಲುಮ್ಡಿಂಗ್-ಬದರ್‌ಪುರ್ ವಿಭಾಗದ ಬಳಿ ಈ ಘಟನೆ ನಡೆದಿದೆ. ಇಲ್ಲಿಯವರೆಗೆ ಯಾವುದೇ ಸಾವು-ನೋವುಗಳ ವರದಿಯಾಗಿಲ್ಲ. ಕಾರ್ಯಾಚರಣೆಗಾಗಿ ಹಿರಿಯ ಅಧಿಕಾರಿ ಅಪಘಾತ ಸಂಭವಿಸಿದ ಸ್ಥಳಕ್ಕೆ ತೆರಳಿದ್ದಾರೆ. ಸದ್ಯಕ್ಕೆ ಲುಮ್ಡಿಂಗ್-ಬದರ್‌ಪುರ ವಿಭಾಗದಲ್ಲಿ ರೈಲು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ. ಈ ಬಗ್ಗೆ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿರುವ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಎಲ್ಲಾ ಪ್ರಯಾಣಿಕರು ಸುರಕ್ಷತೆಯಿಂದ ಇದ್ದಾರೆ ಎಂದು ತಿಳಿಸಿದ್ದಾರೆ.
ರೈಲನಲ್ಲಿ ಬಂದಿದ್ದ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಲೆಕ್ಕ ಹಾಕಲಾಗುತ್ತಿದೆ. ಹಳಿ ತಪ್ಪಿದ ಕಾರಣದ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.ಅಸ್ಸಾಂನ ದಿಮಾ ಹಸಾವೊ ಜಿಲ್ಲೆಯಲ್ಲಿ ಅಗರ್ತಲಾ-ಲೋಕಮಾನ್ಯ ಟರ್ಮಿನಸ್ ಎಕ್ಸ್‌ಪ್ರೆಸ್‌ನ ಎಂಟು ಬೋಗಿಗಳು ಹಳಿತಪ್ಪಿದ್ದು, ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ರೈಲ್ವೆ ವಕ್ತಾರರು ಖಚಿತಪಡಿಸಿದ್ದಾರೆ. ಪವರ್ ಕಾರ್ ಮತ್ತು ಇಂಜಿನ್ ಸೇರಿದಂತೆ ಹಲವಾರು ಕೋಚ್‌ಗಳು ಟ್ರ್ಯಾಕ್‌ನಿಂದ ಹೊರಬಿದ್ದಿವೆ.
ಇತ್ತೀಚೆಗೆ ಕರ್ನಾಟದ ಮೈಸೂರು (Mysuru), ಬೆಂಗಳೂರು ಮೂಲಕವಾಗಿ ಬಿಹಾರದ ದರ್ಭಾಂಗ್‌ಗೆ (Darbhanga) ಹೊರಟಿದ್ದ ಭಾಗಮತಿ ಎಕ್ಸ್‌ಪ್ರೆಸ್ ರೈಲು ಚೆನ್ನೈನ ಕವರಪೆಟ್ಟೈ ಬಳಿ ಭೀಕರ ಅಪಘಾತಕ್ಕೊಳಗಾಗಿತ್ತು. ಲೂಪ್ ಲೈನ್‍ನಲ್ಲಿ ನಿಂತಿದ್ದ ಗೂಡ್ಸ್ ರೈಲಿಗೆ ಭಾಗಮತಿ ಎಕ್ಸ್‌ಪ್ರೆಸ್ ಡಿಕ್ಕಿ ಹೊಡೆದು, 13 ಬೋಗಿಗಳು ಹಳಿ ತಪ್ಪಿದ್ದವು.