ಶಿಗ್ಗಾವಿ-ಸವಣೂರು ಕ್ಷೇತ್ರದಲ್ಲಿ ಪಠಾಣ್ ನೂರಕ್ಕೆ ನೂರು ಗೆಲ್ತಾರೆ: ಸಿ.ಎಂ.ಸಿದ್ದರಾಮಯ್ಯ ಘೋಷಣೆ

0

ಈ ಬಾರಿ ಶಿಗ್ಗಾವಿ-ಸವಣೂರು ಕ್ಷೇತ್ರದಲ್ಲಿ ಪಠಾಣ್ ನೂರಕ್ಕೆ ನೂರು ಗೆಲ್ತಾರೆ: ಸಿ.ಎಂ.ಸಿದ್ದರಾಮಯ್ಯ ಘೋಷಣೆ

ಕಳೆದ ಚುನಾವಣೆಯ ಕತೆಯೇ ಬೇರೆ-ಈ ಚುನಾವಣೆಯ ಫಲಿತಾಂಶವೇ ಬೇರೆ ಆಗತ್ತೆ: ಸಿ.ಎಂ ವಿಶ್ವಾಸದ ನುಡಿ*

ಮೋದಿ ಹೇಳಿದ್ದು ಸಾಬೀತು ಮಾಡಿದ್ರೆ ನಾನು ರಾಜಕೀಯ ನಿವೃತ್ತಿ: ಇಲ್ಲದಿದ್ದರೆ ನೀವು ನಿವೃತ್ತಿ ಘೋಷಿಸಿ: ಪ್ರಧಾನಿ ಮೋದಿಯವರಿಗೆ ಸಿಎಂ ನೇರ ಸವಾಲು*

ಶಿಗ್ಗಾವಿ-ಸವಣೂರು : ಈ ಬಾರಿ ಶಿಗ್ಗಾವಿ-ಸವಣೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪಠಾಣ್ ನೂರಕ್ಕೆ ನೂರು ಗೆಲ್ತಾರೆ. ಕಳೆದ ಚುನಾವಣೆಯ ಕತೆಯೇ ಬೇರೆ-ಈ ಚುನಾವಣೆಯ ಫಲಿತಾಂಶವೇ ಬೇರೆ ಆಗತ್ತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ವ್ಯಕ್ತಪಡಿಸಿದರು.

ಶಿಗ್ಗಾವಿಯಲ್ಲಿ ನಡೆದ ಬೃಹತ್ ಜನ ಸಮಾವೇಶದಲ್ಲಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದರು.

ಕಳೆದ ಚುನಾವಣೆಯಲ್ಲಿ ಕಡೆ ಗಳಿಗೆಯಲ್ಲಿ ಪಠಾಣ್ ಅವರಿಗೆ ಟಿಕೆಟ್ ನೀಡಿದೆವು. ನಾನಾಗಲೀ, ನಮ್ಮ ಪಕ್ಷದ ಮುಖಂಡರಾಗಲಿ ಪ್ರಚಾರಕ್ಕೆ ಬರಲಾಗಲಿಲ್ಲ. ಅದಕ್ಕೇ ಪಠಾಣ್ ಅವರಿಗೆ ಹಿನ್ನಡೆ ಆಯಿತು.

ಈ ಚುನಾವಣೆಯಲ್ಲಿ ಪಠಾಣ್ ಅವರನ್ನು ಗೆಲ್ಲಿಸಲೇಬೇಕು ಎಂದು ನಾನು ತೀರ್ಮಾನ ಮಾಡಿದ್ದೇನೆ. ಡಿಸಿಎಂ ಡಿ.ಕೆ.ಶಿವಕುಮಾರ್ , ಸಚಿವರಾದ ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್, ಈಶ್ವರ್ ಖಂಡ್ರೆ, ಶಿವಾನಂದ ಪಾಟೀಲರು, ಹೆಚ್.ಕೆ.ಪಾಟೀಲರು ಸೇರಿ ಪ್ರತಿಯೊಬ್ಬರೂ ತೀರ್ಮಾನ ಮಾಡಿ ಆಗಿದೆ. ಆದ್ದರಿಂದ ಪಠಾಣ್ ಅವರನ್ನು ಶಿಗ್ಗಾವಿ ಜನ ಈ ಬಾರಿ ಗೆಲ್ಲಿಸ್ತಾರೆ. ಇದರಲ್ಲಿ ಎಳ್ಳಷ್ಟೂ ಅನುಮಾನ ಬೇಡ ಎಂದರು.

ಕಳೆದ ಚುನಾವಣೆಯ ಕತೆಯೇ ಬೇರೆ-ಈ ಚುನಾವಣೆಯ ಫಲಿತಾಂಶವೇ ಬೇರೆ ಆಗತ್ತದೆ ಎಂದು ಸಿ.ಎಂ ವಿಶ್ವಾಸದಿಂದ ನುಡಿದರು.

ಮೋದಿಯವರಿಗೆ ನೇರ ಸವಾಲೆಸೆದ ಸಿಎಂ

ಸುಳ್ಳುಗಾರ ಪ್ರಧಾನಿ ಮೋದಿಯವರು ನಮ್ಮ ಮೇಲೆ ಹೊಸ ಸುಳ್ಳಿನ ಆರೋಪ ಮಾಡಿದ್ದಾರೆ. ಅಬಕಾರಿ ಇಲಾಖೆಯಿಂದ 700 ಕೋಟಿ ತಂದು ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಚುನಾವಣೆ ಮಾಡುತ್ತಿದೆ ಎಂದು ಹಸಿ ಹಸಿ ಸುಳ್ಳು ಹೇಳಿದ್ದಾರೆ.

ಮೋದಿ ಅವರು ಹೇಳಿದ್ದು ಸಾಬೀತು ಮಾಡಿದ್ರೆ ನಾನು ರಾಜಕೀಯ ನಿವೃತ್ತಿ ಘೋಷಿಸ್ತೀನಿ. ಇಲ್ಲದಿದ್ದರೆ ನೀವು ನಿವೃತ್ತಿ ಘೋಷಿಸ್ತೀರಾ ಎಂದು ಪ್ರಧಾನಿ ಮೋದಿಯವರಿಗೆ ಸಿಎಂ ನೇರ ಸವಾಲು ಹಾಕಿದರು.

ಮೋದಿಯವರು ಕುಟುಂಬ ರಾಜಕಾರಣದ ಬಗ್ಗೆ ಭಯಾನಕ ಭಾಷಣ ಮಾಡ್ತಾರೆ. ಆದರೆ ಇಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ ಅವರ ಮೊಮ್ಮಗ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮಗನಿಗೆ ಟಿಕೆಟ್ ನೀಡಿದ್ದೀರಲ್ಲಾ ಇದು ಕುಟುಂಬ ರಾಜಕಾರಣ ಅಲ್ವಾ?

ಮಾಜಿ ಪ್ರಧಾನಿ ದೇವೇಗೌಡರು, ಇವರ ಮಕ್ಕಳಾದ ಕುಮಾರಸ್ವಾಮಿ, ರೇವಣ್ಣ, ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ, ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರೆಲ್ಲಾ ಆಯ್ತು. ಈಗ ಕುಮಾರಸ್ವಾಮಿ ದಂಪತಿ ಪುತ್ರ ನಿಖಿಲ್ ಕುಮಾರಸ್ವಾಮಿ, ರೇವಣ್ಣ ದಂಪತಿ ಪುತ್ರರಾದ ಪ್ರಜ್ವಲ್ ರೇವಣ್ಣ, ಸೂರಜ್ ರೇವಣ್ಣ…ಇವರೆಲ್ಲಾ ಏನು ಮೋದಿಯವರೇ? ಇವರೆಲ್ಲಾ ಕುಟುಂಬ ರಾಜಕಾರಣ ಮಾಡ್ತಿಲ್ವಾ ಎಂದು ಪ್ರಶ್ನಿಸಿದ ಮುಖ್ಯಮಂತ್ರಿಗಳು ಭಾಷಣ ಮಾಡೋದು ಸುಲಭ ಮೋದಿಯವರೇ. ನುಡಿದಂತೆ ನಡೆಯೋದು ನಿಮ್ಮಿಂದ ಆಗಲ್ಲ ಎಂದರು.

ಕೋವಿಡ್ ಸಂದರ್ಭದಲ್ಲೂ ಲೂಟಿ ಮಾಡಿದವರು ನಿಮಗೆ ಬೇಕಾ?

ಕೊರೋನಾ ಸಂದರ್ಭದಲ್ಲಿ ಇಡೀ ರಾಜ್ಯದ ಜನರ ಪರಿಸ್ಥಿತಿ ಹೇಗಿತ್ತು ಅಂತ ನಮಗೂ ಗೊತ್ತು, ನಿಮಗೂ ಗೊತ್ತು. ಇಂಥಾ ಸಂದರ್ಭದಲ್ಲೂ ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವರಾದ ಶ್ರೀರಾಮುಲು, ಸುಧಾಕರ್ ಚೀನಾ ಜೊತೆಗೆ ವ್ಯವಹಾರ ಮಾಡಿ ಪಿಪಿಇ ಕಿಟ್ ಖರೀದಿ ಸೇರಿ ಕಮಿಷನ್ ತಿಂದಿದ್ದು, ದುಡ್ಡು ಲೂಟಿ ಮಾಡಿದ್ದು ವರದಿ ಆಗಿದೆ. ಚಾಮರಾಜನಗರದಲ್ಲಿ ಆಕ್ಸಿಜನ್ ಕೊಡದೆ 39 ಜನರ ಸಾವಿಗೆ ಕಾರಣರಾದ ಇವರಿಗೆಲ್ಲಾ ಕ್ಷಮೆ ಇದೆಯಾ? ಇವರನ್ನು ಕ್ಷಮಿಸಿ ಮತ ಹಾಕಿದ್ರೆ ನಿಮ್ಮ ಮತಗಳಿಗೆ ಗೌರವ ಬರುತ್ತದಾ ಯೋಚಿಸಿ ಎಂದರು.

ಕೊರೋನಾ ಸಂದರ್ಭದಲ್ಲಿ ಮೃತದೇಹಗಳ, ಹೆಣಗಳ ಲೆಕ್ಕದಲ್ಲೂ ಹಣ ಲೂಟಿ ಮಾಡಿದ ಕೆಟ್ಟ ಸರ್ಕಾರ ಬಿಜೆಪಿಯದ್ದು. ಇಂಥಾ ಕೆಟ್ಟ ಸರ್ಕಾರ ಭಾರತದ ಚರಿತ್ರೆಯಲ್ಲೇ ಬಂದಿರಲಿಲ್ಲ ಎಂದರು.

ಬೊಮ್ಮಾಯಿ ಗೆಲ್ಲಿಸಿ ಏನು ಸಿಕ್ಕಿದೆ ಕ್ಷೇತ್ರಕ್ಕೆ?

ಬಸವರಾಜ ಬೊಮ್ಮಾಯಿ ಅವರನ್ನು ನಾಲ್ಕು ಬಾರಿ ಗೆಲ್ಲಿಸಿದ್ರಿ. ಶಾಸಕ ಮಾಡಿದ್ರಿ, ಮಂತ್ರಿ ಮಾಡಿದ್ರಿ, ಮುಖ್ಯಮಂತ್ರಿ ಮಾಡಿದ್ರಿ, ಸಂಸದರಾಗಿಯೂ ಮಾಡಿದ್ರಿ. ಇಷ್ಟಾಗಿ ಶಿಗ್ಗಾವಿ ಕ್ಷೇತ್ರಕ್ಕೆ ಏನಾದ್ರೂ ಸಿಕ್ಕಿದೆಯಾ? ಬಸವರಾಜ ಬೊಮ್ಮಾಯಿ ಅವರಿಂದ ಕ್ಷೇತ್ರಕ್ಕೆ ಏನಾದ್ರೂ ಸಿಗದಿದ್ರೂ ಬೇಡ. ಬೊಮ್ಮಾಯಿಯವರಾದ್ರೂ ಶಿಗ್ಗಾವಿ ಜನರ ಕೈಗೇ ಸಿಗಲಿಲ್ಲ. ಅಪ್ಪನೇ ಗೆದ್ದ ಮೇಲೆ ನಿಮ್ಮ ಕೈಗೆ ಸಿಗಲಿಲ್ಲ. ಇನ್ನು ಇವರ ಮಗ ಭರತ್ ಬೊಮ್ಮಾಯಿ ನಿಮ್ಮ ಕೈಗೆ ಸಿಗೋದಾದ್ರೂ ಹೌದಾ ಎಂದು ಪ್ರಶ್ನಿಸಿದರು.

ಈಗ ಬರೀ ಹಣ ಬಲದಲ್ಲಿ ಶಿಗ್ಗಾವಿ ಮತದಾರರನ್ನು ಮರಳು ಮಾಡಿ ಗೆಲ್ಲಬಹುದು ಎಂದುಕೊಂಡಿದ್ದಾರೆ. ಇದು ಶಿಗ್ಗಾವಿ ಜನತೆಗೆ ಮಾಡುವ ಅವಮಾನ ಎಂದರು.

ನಾವು ಐದು ಗ್ಯಾರಂಟಿಗಳ ಮೂಲಕ ರಾಜ್ಯದ ಪ್ರತೀ ಕುಟುಂಬಗಳಿಗೆ ಆರ್ಥಿಕ ಶಕ್ತಿ ನೀಡಿದ್ದೇವೆ. ನಾವು ಕೆಲಸ ಮಾಡಿ, ನುಡಿದಂತೆ ನಡೆದು ನಿಮ್ಮ ಎದುರಿಗೆ ಬಂದು ನಿಂತಿದ್ದೇವೆ. ನಾವು ಕೆಲಸ ಮಾಡಿ ಕೂಲಿ ಕೇಳುತ್ತಿದ್ದೇವೆ. ಪಠಾಣ್ ಅವರನ್ನು ಗೆಲ್ಲಿಸಿ ಎಂದು ಕರೆ ನೀಡಿದರು.

ಪಠಾಣ್ ಗೆಲ್ಲಿಸಿ ಅಭಿವೃದ್ಧಿ ಮಾಡ್ತಾರೆ

ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಪಠಾಣ್ ಅವರನ್ನು ಗೆಲ್ಲಿಸಿ. ಇವರು ನಿಮ್ಮ ಸೇವೆಗೆ ಸದಾ ನಿಮ್ಮ ಕೈಗೆ ಸಿಗ್ತಾರೆ. ಸರ್ಕಾರ ಪಠಾಣ್ ಅವರ ಜೊತೆಗೆ ಇರತ್ತೆ. ಶಿಗ್ಗಾವಿ ಜನರ ಪ್ರಗತಿಗೆ, ಕ್ಷೇತ್ರದ ಅಭಿವೃದ್ಧಿಗೆ ಪಠಾಣ್ ಜೊತೆ ನಾವೆಲ್ಲಾ ಸೇರಿ ಕೆಲಸ ಮಾಡೋಣ ಎಂದರು.

ಶಿಗ್ಗಾವಿ ಸೂಫಿ, ಸಂತರು, ಶರಣರು, ದಾಸರು ನಡೆದಾಡಿದ ನೆಲ. ಇದು ಸರ್ವ ಜನಾಂಗದ ಶಾಂತಿಯ ತೋಟ. ಆದ್ದರಿಂದ ಜಾತಿ, ಧರ್ಮದ ಹೆಸರಿನಲ್ಲಿ ಶಿಗ್ಗಾವಿ ಜನರನ್ನು ಒಡೆದು ಆಳಲು ಬಿಡಬೇಡಿ. ಈ ನೆಲದ, ಈ ಮಣ್ಣಿನ ಸಂಸ್ಕೃತಿ ಕಾಪಾಡಿ ಎಂದು ಕರೆ ನೀಡಿದರು‌.

ದೇವೇಗೌಡರೇ ಹಾಸನದ ಹೆಣ್ಣು‌ಮಕ್ಕಳು ಕಣ್ಣೀರಲ್ಲಿ ಕೈ ತೊಳೆಯುವಾಗ ನಿಮ್ಮ ಕಣ್ಣಲ್ಲಿ ನೀರು ಬರಲಿಲ್ಲ ಏಕೆ?

ಮೋದಿಯವರ ಬಗ್ಗೆ ತಾವು ಏನು ಮಾತಾಡಿದ್ರು ಅನ್ನೋದು ಈಗ ದೇವೇಗೌಡರಿಗೆ ಮರೆತು ಹೋಗಿದೆ. ಮೋದಿ ಪ್ರಧಾನಿ ಆದ್ರೆ ದೇಶಬಿಟ್ಟು ಹೋಗ್ತೀನಿ ಅಂದಿದ್ರು. ಈಗ ಸಿದ್ದರಾಮಯ್ಯ ಅವರ ಸರ್ಕಾರ ತೆಗೆಯುವವರೆಗೂ ನಿದ್ದೆ ಮಾಡಲ್ಲ ಅಂತಿದ್ದಾರೆ. ಕಣ್ಣೀರು ಹಾಕುತ್ತಿದ್ದಾರೆ. ಕಣ್ಣೀರು ಹಾಕುವುದು ಅವರ ಚರಿತ್ರೆಯಂತೆ.

ಕಣ್ಣೀರು ಹಾಕುವುದೇ ನಿಮ್ಮ ಚರಿತ್ರೆ ಆಗಿದ್ರೆ, ದೇವೇಗೌಡರೇ ಹಾಸನದ ಹೆಣ್ಣು‌ಮಕ್ಕಳು ಕಣ್ಣೀರಲ್ಲಿ ಕೈ ತೊಳೆಯುವಾಗ ನಿಮ್ಮ ಕಣ್ಣಲ್ಲಿ ನೀರು ಬರಲಿಲ್ಲ ಏಕೆ? ಅಲ್ಲಿಗೆ ಹೋಗಿ ದೌರ್ಜನ್ಯಕ್ಕೆ ಒಳಗಾದ ಹೆಣ್ಣು ಮಕ್ಕಳ ಪರವಾಗಿ ಕಣ್ಣೀರು ಹಾಕಲಿಲ್ಲ ಏಕೆ ಎಂದು ಪ್ರಶ್ನಿಸಿದರು.

ವಕ್ಫ್: ಬಿಜೆಪಿ ತಾನೇ ಪ್ರಣಾಳಿಕೆಯಲ್ಲಿ ಹೇಳತ್ತೆ, ತಾನೇ ಪ್ರತಿಭಟನೆ ಮಾಡತ್ತೆ

ವಕ್ಫ್ ಆಸ್ತಿಗಳ ಒತ್ತುವರಿ ತೆರವುಗೊಳಿಸುವುದಾಗಿ ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲೇ ಘೋಷಿಸಿತ್ತು. ಬಿಜೆಪಿ ಸರ್ಕಾರವೇ ಒತ್ತುವರಿ ತೆರವುಗೊಳಿಸಿ ಎಂದು 216 ಮಂದಿಗೆ ನೋಟಿಸ್ ನೀಡಿತ್ತು. ಈಗ ಕಾಂಗ್ರೆಸ್ ವಿರುದ್ಧ ಆರೋಪ ಮಾಡುತ್ತಾ ಪ್ರತಿಭಟನೆ ನಡೆಸುತ್ತಿದೆ. ಒಬ್ಬೇ ಒಬ್ಬ ರೈತರನ್ನೂ ಒಕ್ಕಲೆಬ್ಬಿಸಲು ಬಿಡುವುದಿಲ್ಲ ಎಂದು ಘೋಷಿಸಿದ್ದು ನಮ್ಮ‌ ಸರ್ಕಾರ. ನೋಟಿಸ್ ವಾಪಾಸ್ ಪಡೆಯುವಂತೆ ನಮ್ಮ ಸರ್ಕಾರ ಅಧಿಕೃತ ಸುತ್ತೋಲೆ ಕೂಡ ಹೊರಡಿಸಿ ಆಗಿದೆ ಎಂದರು.

ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್, ಈಶ್ವರ್ ಖಂಡ್ರೆ, ಶಿವಾನಂದ ಪಾಟೀಲ್, ಬೈರತಿ ಸುರೇಶ್ ಸೇರಿ ನಾಯಕರುಗಳು ಮಂತ್ರಿ, ಶಾಸಕರುಗಳ ದೊಡ್ಡ ತಂಡವೇ ಸಭೆಯಲ್ಲಿ ಉಪಸ್ಥಿತರಿದ್ದು ಪಠಾಣ್ ಗೆಲುವಿನ‌ ಸಂದೇಶ ನೀಡಿತು.

About The Author

Leave a Reply

Your email address will not be published. Required fields are marked *