8ನೇ ವರ್ಷದ ಮಂಗಳೂರು ಕಂಬಳಕ್ಕೆ ಆದ್ದೂರಿ ಚಾಲನೆ

0

8ನೇ ವರ್ಷದ ಮಂಗಳೂರು ಕಂಬಳಕ್ಕೆ ಆದ್ದೂರಿ ಚಾಲನೆ: ರಾಮ – ಲಕ್ಷ್ಮಣ ಜೋಡುಕರೆಯಲ್ಲಿ ಪಂದ್ಯಾಟ.

ದಕ್ಷಿಣ ಕನ್ನಡ ಸಂಸದ ಹಾಗೂ ಮಂಗಳೂರು ಕಂಬಳ ಸಮಿತಿ ಅಧ್ಯಕ್ಷ ಕ್ಯಾ.ಬ್ರಿ ಜೇಶ್ ಚೌಟ ಸಾರಥ್ಯದ ಬಂಗ್ರಕೂಳೂರಿನ ಗೋಲ್ಡ್‌ಫಿಂಚ್‌ ಸಿಟಿಯ ರಾಮ-ಲಕ್ಷ್ಮಣ ಜೋಡು ಕರೆಯಲ್ಲಿ 8ನೇ ವರ್ಷದ ಮಂಗಳೂರು ಕಂಬಳಕ್ಕೆ ಶನಿವಾರ ಬೆಳಗ್ಗೆ ಕಾಶ್ಮೀರದ ರಜೌರಿಯಲ್ಲಿ ಉಗ್ರರೊಂದಿಗಿನ ಕಾಳಗದಲ್ಲಿ ಹುತಾತ್ಮರಾದ ಕ್ಯಾ.ಎಂ.ವಿ. ಪ್ರಾಜಲ್ ಅವರ ತಂದೆ, ಎಂಆರ್ ಪಿಎಲ್ ನ ನಿವೃತ್ತ ಆಡಳಿತ ನಿರ್ದೇಶಕ ಎಂ. ವೆಂಕಟೇಶ್ ಅವರು ಚಾಲನೆ ನೀಡಿದ್ದಾರೆ.

ಈ ವೇಳೆ ಮಾತನಾಡಿದ ಎಂ. ವೆಂಕಟೇಶ್ ಅವರು, ಕ್ಯಾ.ಎಂ.ವಿ. ಪ್ರಾಂಜಲ್ ಆಟವಾಡಿ ಬೆಳೆದ ನೆಲವಾದ ತುಳುನಾಡಿನ ಸಾಂಸ್ಕೃತಿಕ ವೈಭವ ಕಂಬಳ. ಇಂದು ಮಗ ಬದುಕಿದ್ದರೆ ಈ ಸಂಸ್ಕೃತಿಯನ್ನು ಆನಂದಿಸಲು ಆತನ ಜೊತೆ ಬರುತ್ತಿದ್ದೆವು. ನಾವೆಲ್ಲರೂ ಈ ಭವ್ಯ ತುಳುನಾಡಿ ಸಂಸ್ಕೃತಿಯ ಭಾಗವಾಗಿದ್ದು ಇವೆಲ್ಲವನ್ನು ನಮ್ಮ ತಾಯಿನಾಡಿನ ಪರಿಸರದಿಂದ, ಪ್ರಾಣಿ-ಪಕ್ಷಿಗಳಿಂದ ಕಲಿಯಬೇಕು. ಈ ಮಣ್ಣಿನ ಜನಪದ ಕ್ರೀಡೆ ಕಂಬಳ ಉಚ್ಚ್ರಾಯ ಸ್ಥಿತಿಯಲ್ಲಿರುವುದು ಬಹಳ ಹೆಮ್ಮಯ ವಿಚಾರ ಎಂದು ಹೇಳಿದರು.

ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದ ಅಧ್ಯಕ್ಷ ಕೆ. ಚಿತ್ತರಂಜನ್‌ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಗುರುಪುರ ವಜ್ರ ದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ರಾಮಕೃಷ್ಣ ಮಠದ ಚಿದಂಬರನಾಂದ ಸ್ವಾಮೀಜಿ, ಶ್ರೀ ಕಟೀಲು ದುರ್ಗಾ ಪರಮೇಶ್ವರಿ ದೇವಳದ ಅರ್ಚಕ‌ ಅನಂತ ಪದ್ಮನಾಭ ಅಸ್ರಣ್ಣ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿಶ್ವವಿದ್ಯಾಲಯದ ಪ್ರೊ. ಪಿ.ಎಲ್ ಧರ್ಮ ಮಾತನಾಡಿ, ಕಂಬಳವನ್ನು ನಮ್ಮ ಪೂರ್ವಿಕರು ಪ್ರಾರಂಭ ಮಾಡಿದ್ದಾಗ ಅದು ಬೇಧ-ಭಾವವಿಲ್ಲದೆ ಇಡೀ ಸಮಾಜವನ್ನು ಒಟ್ಟುಗೂಡಿಸುವ ವೇದಿಕೆಯಾಗಿತ್ತು. ಇಂದು ಕಂಬಳದ ಮೂಲಕ ದೇಶ ಕಟ್ಟುವ, ಒಟ್ಟಾಗುವ ಕೆಲಸವಾಗಲಿ ಎಂದು ಆಶಯ ವ್ಯಕ್ತಪಡಿಸಿದರು.

ಮಂಗಳೂರು ಕಂಬಳ ಸಮಿತಿ ಅಧ್ಯಕ್ಷ ಕ್ಯಾ. ಚೌಟ ಅತಿಥಿಗಳನ್ನು ಸ್ವಾಗತಿಸಿ ಮಾತನಾಡಿ,

ಕಂಬಳ ನಿಷೇಧದ ವಿರುದ್ಧ, ಕಂಬಳ ಉಳಿಸುವ ನಿಟ್ಟಿನಲ್ಲಿ ಹೋರಾಟ ಹಮ್ಮಿಕೊಂಡ ಸಂದರ್ಭದಲ್ಲಿ ಮಕ್ಕಳಿಂದ ಹಿಡಿದು ಮಹಿಳೆಯರು ಯುವಕರು ಎಂಬ ಬೇಧ-ಭಾವವಿಲ್ಲದೆ ಜೊತೆಗೆ 200 ಜೋಡಿ ಕೋಣಗಳು ಸೇರಿ ನಡೆಸಿದ ಹೋರಾಟ ತುಳುನಾಡಿನ ಇತಿಹಾಸದಲ್ಲಿ ಮತ್ತೊಂದು ಇಲ್ಲ.

ಆ ಸಂದರ್ಭದಲ್ಲಿ ಸೇರಿದ್ದ ಯುವಕರು ನಿರ್ಣಯ ತೆಗೆದುಕೊಂಡು ನಮ್ಮ ಸಂಸ್ಕೃತಿ ಉಳಿಸುವ ಮತ್ತು ಪರಿಚಯಿಸುವ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಕಂಬಳವನ್ನು ಆರಂಭಿಸಲು ತೀರ್ಮಾನಿಸಲಾಗಿತ್ತು. ಎಂ.ಆರ್. ಜಿ ಗ್ರೂಪ್ ನ ಸಿ.ಎಂ.ಡಿ ಪ್ರಕಾಶ್‌ ಶೆಟ್ಟಿ ಅವರು ವಿಶಾಲವಾದ ಜಾಗವನ್ನು ಒದಗಿಸಿ ಕಾರ್ಯಕ್ರಮ ನಡೆಸಲು ಹುರಿದುಂಬಿಸಿ, ಸಹಕಾರ ನೀಡಿದ್ದಾರೆ ಎಂದು ಹೇಳಿದರು.

ಮಾಜಿ ಪ್ರಧಾನಿ ಡಾ. ಸಿಂಗ್ ಹಾಗೂ ಅಗಲಿದ ಯೋಧರಿಗೆ ನಮನ.

ಮಂಗಳೂರು ಕಂಬಳದಲ್ಲಿ ದೇಶ ಪ್ರೇಮದ ಸಂಕೇತವಾಗಿ ನೆರೆದಿದ್ದ ಎಲ್ಲ ಗಣ್ಯರು ತಾಯಿ ಭಾರತಾಂಬೆಗೆ ಪುಷ್ಪಾರ್ಚನೆ ಸಲ್ಲಿಸಿದರು.

  1.  ಆ ಬಳಿಕ ನಮ್ಮನಗಲಿದ ದೇಶದ 14ನೇ ಪ್ರಧಾನಮಂತ್ರಿ ಡಾ. ಮನಮೋಹನ್ ಸಿಂಗ್ ಅವರಿಗೆ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.

ನಂತರ ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ಡಿ.24ರ ಸಂಜೆ ಸೇನಾ ವಾಹನ ಪ್ರಪಾತಕ್ಕೆ ಉರುಳಿದ ದುರಂತದಲ್ಲಿ ಮಡಿದ ಕುಂದಾಪುರದ ಅನೂಪ್ ಸಹಿತ ಐವರು ಯೋಧರಿಗೆ ಪುಷ್ಪ ನಮನ ಸಲ್ಲಿಸಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಸಭಾ ಕಾರ್ಯಕ್ರಮವನ್ನು ಮಂಗಳೂರು ಕಂಬಳ ಉಪಾಧ್ಯಕ್ಷ ಕೇಶವ ಬಂಗೇರ ನಿರೂಪಿಸಿದ್ದು, ಕಾರ್ಯಕ್ರಮದ ವೇದಿಕೆಯಲ್ಲಿ ಕ್ಯಾ. ಗಣೇಶ್ ಕಾರ್ಣಿಕ್ , ಮಂಗಳೂರು ಕಂಬಳ ಸಂಚಾಲಕ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಹರಿಕೃಷ್ಣ ಪುನರೂರು,

ಜಯರಾಮ್ ಶೆಟ್ಟಿ ಕುಡುಂಬೂರು ಗುತ್ತು, ಆಶಿಕ್ ಬಳ್ಳಾಲ್ ಕೂಳೂರು ಬೀಡು, ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷರಾದ ತುಕರಾಮ್ ಪೂಜಾರಿ, ನಗರ ಪಾಲಿಕೆಯ ವಿರೋಧ ಪಕ್ಷದ ನಾಯಕ,ಅನಿಲ್ ಕುಮಾರ್, ಪಾಲಿಕೆ ಸದಸ್ಯರಾದ ಕಿರಣ್‌ ಕುಮಾರ್‌ ಕೋಡಿಕಲ್‌, ಮಾಜಿ ಮೇಯರ್ ಕವಿತಾ ಸನಿಲ್,

ಮಾಜಿ ಸೈನಿಕರ ಸಂಘದ ಅಧ್ಯಕ್ಷ ಶ್ರೀಕಾಂತ್ ಶೆಟ್ಟಿ , ಕರ್ನಲ್ ಶರತ್ ಭಂಡಾರಿ ಕ್ಯಾ. ದೀಪಕ್ ಅಡ್ಯಂತಾಯ, ಬ್ರಿಗೇಡಿಯರ್ ಐ.ಎನ್‌ ರೈ, ಪ್ರದೀಪ್ ಕುಮಾರ್ ಕಲ್ಕೂರ, ಮಂಗಳೂರು ಕಂಬಳ ಸಮಿತಿ ಗೌರವ ಸಲಹೆಗಾರ ಪ್ರಸಾದ್ ಕುಮಾರ್ ಶೆಟ್ಟಿ, ಬಯಲುಗುತ್ತು ಮಾರಪ್ಪಣ್ಣ ಮತ್ತಿತರರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *