“ನೆರವು ಪಡೆದ ಮಕ್ಕಳು ಮುಂದೆ ನನ್ನಂತೆ ಸಮಾಜದ ನೊಂದವರ ಪರ ನಿಲ್ಲಬೇಕು“ -ಡಾ.ಪ್ರಕಾಶ್ ಶೆಟ್ಟಿ

0

ಆಶಾಪ್ರಕಾಶ್ ಶೆಟ್ಟಿ ಸಹಾಯ ಹಸ್ತ “ನೆರವು” ಪ್ರದಾನ‌

4 ಸಾವಿರ ಕುಟುಂಬಗಳಿಗೆ 9.5 ಕೋ. ರೂ ಆರ್ಥಿಕ ನೆರವು

ಮಂಗಳೂರು: ಎಂ.ಆರ್.ಜಿ. ಗ್ರೂಪ್ ನ ಆಶಾ ಪ್ರಕಾಶ್ ಶೆಟ್ಟಿ ಸಹಾಯ ಪ್ರದಾನ ಸಮಾರಂಭ ‘ನೆರವು-2025’ ಗುರುವಾರ ಸಂಜೆ ಬಂಗ್ರಕೂಳೂರಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಅತಿಥಿಗಳು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತಾಡಿದ ಎಂ.ಆರ್.ಜಿ.ಗ್ರೂಪಿನ ಚೇರ್ಮನ್ ಡಾ.ಪ್ರಕಾಶ್ ಶೆಟ್ಟಿ ಅವರು,


“ನಾನೊಬ್ಬ ಸಾಮಾನ್ಯ ಕುಟುಂಬದಲ್ಲಿ ಒಂದು ಸಣ್ಣ ಹಳ್ಳಿಯಲ್ಲಿ ಜನಿಸಿದೆ. ತಂದೆ ಮಾಧವ ಶೆಟ್ಟಿ, ತಾಯಿ ರತ್ನ ಶೆಟ್ಟಿ ಅವರೊಂದಿಗೆ ಕಷ್ಟದ ಜೀವನ ನಡೆಸಿ ಶಾಲಾ ದಿನಗಳಲ್ಲಿ ಜಾತಿ, ಧರ್ಮ ಯಾವುದನ್ನು ನೋಡದೆ ಎಲ್ಲರ ಮನೆಗಳಲ್ಲಿ ತಿಂದು ಅವರ ಅಂಗಳದಲ್ಲಿ ಆಡಿದ ನೆನಪು ಇನ್ನೂ ಇದೆ. ಅಮ್ಮನಿಗಿಂತ ಶ್ರೇಷ್ಠವಾದುದು ಜಗತ್ತಿನಲ್ಲಿ ಯಾವುದೂ ಇಲ್ಲ. ನಮ್ಮ ಮುಂದಿನ ಬದುಕನ್ನು ರೂಪಿಸುವುದು ನಮ್ಮ ಅಮ್ಮ ಮಾತ್ರ. ಅಮ್ಮನ ಮಮತೆ, ತಂದೆಯ ಪ್ರೀತಿ, ತುಳುನಾಡಿನ ಸಂಸ್ಕೃತಿ ಜೊತೆಗಿನ ಬದುಕು ನನ್ನನ್ನು ಇಂದು ಈ ಮಟ್ಟಕ್ಕೆ ಬೆಳೆಸಿದೆ. 1983ರಲ್ಲಿ ಬದುಕು ಕಟ್ಟಿಕೊಳ್ಳಲು ಬೆಂಗಳೂರು ತಲುಪಿ 15 ವರ್ಷಗಳ ಕಾಲ ಅವಮಾನ, ಕಷ್ಟ ಎಲ್ಲವನ್ನು ಮೆಟ್ಟಿನಿಂತು ಯಶಸ್ಸಿನತ್ತ ಒಂದೊಂದೇ ಮೆಟ್ಟಿಲು ಹತ್ತತೊಡಗಿದೆ. ರಿಯಲ್ ಎಸ್ಟೇಟ್, ಹೋಟೆಲ್ ಉದ್ಯಮಕ್ಕೆ ಕೈಹಾಕಿದೆ. ದೇವರ ಶಕ್ತಿ ಆಶೀರ್ವಾದದಿಂದ ನಾನೊಬ್ಬ ಉದ್ಯಮಿಯಾಗಿ ಬೆಳೆದೆ. ಆಗ ನನಗೆ ಕಂಡಿದ್ದು ನನ್ನ ಉಡುಪಿ, ಮಂಗಳೂರಿನ ಜನತೆ. ನನ್ನ ಊರಿಗೆ ಏನಾದರೂ ಮಾಡಬೇಕು ಎಂಬ ನಿಟ್ಟಿನಲ್ಲಿ 2019ರಲ್ಲಿ ನನ್ನ ಆತ್ಮೀಯರು ಹೇಳಿದ್ದಕ್ಕೆ ಧ್ವನಿಗೂಡಿಸಿ ನೆರವು ಯೋಜನೆ ಪ್ರಾರಂಭಿಸಿದೆ. ಏಳು ಜಿಲ್ಲೆಗಳ ಫಲಾನುಭವಿಗಳಿಗೆ ಇಂದು ನೀಡುತ್ತಿರುವ ಆರ್ಥಿಕ ಸಹಾಯದ ಸದುಪಯೋಗವಾಗಬೇಕು. ಹಿಂದೆ ನಾನು ನಿಮ್ಮಂತೆ ವೇದಿಕೆಯ ಕೆಳಗಡೆ ಕೂತಿರುತ್ತಿದ್ದೆ. ಇಂದು ನಿಮ್ಮನ್ನು ನೋಡುವಾಗ ಖುಷಿಯಾಗುತ್ತದೆ. ನಿಮಗೆಲ್ಲರಿಗೂ ಪ್ರೇರಣೆಯಾಗಬೇಕು ಎಂದು ಕಾರ್ಯಕ್ರಮ ಆಯೋಜಿಸುತ್ತಿದ್ದೇವೆ. ಮಕ್ಕಳು ಇದರ ಪ್ರಯೋಜನ ಪಡೆದುಕೊಂಡು ಸಮಾಜದಲ್ಲಿ ಎತ್ತರದ ಸ್ಥಾನಕ್ಕೇರಬೇಕು. ಮುಂದೆ ನನ್ನಂತೆ ಸಮಾಜದ ನೊಂದವರ ಶೋಷಿತರ ಪರ ನೀವೆಲ್ಲರೂ ನಿಲ್ಲಬೇಕು“ ಎಂದು ಆಶಯ ವ್ಯಕ್ತಪಡಿಸಿದರು.


”ಈ ವರ್ಷ ನೆರವು ಯೋಜನೆ ಏಳನೇ ವರ್ಷವನ್ನು ಪೂರೈಸುತ್ತಿದೆ. ಇನ್ನು ಮೂರು ವರ್ಷಗಳ ಕಾಲ ಯೋಜನೆ ಮುಂದುವರಿಯುತ್ತದೆ. ದಶಮಾನೋತ್ಸವ ಬಳಿಕ ‘ನೆರವು’ ಯೋಜನೆಯ ಫಲಾನುಭವಿಗಳನ್ನು ಸೇರಿಸಿಕೊಂಡು ಅದಕ್ಕೊಂದು ಸಾಮೂಹಿಕ ರೂಪ ಕೊಡುವ ಚಿಂತನೆ ಇದೆ. ಈ ವಿಸ್ತರಣೆಯಿಂದ ಪ್ರತೀ ವರ್ಷ ಕನಿಷ್ಠ ಹದಿನಾಲ್ಕು ಸಾವಿರ ಕುಟುಂಬಗಳಿಗೆ ನೆರವು ಕೊಡಲು ಸಾಧ್ಯವಾಗಲಿದೆ. ಇಂದಿನ ಆಧುನಿಕ ತಂತ್ರಜ್ಞಾನ ಯುಗದಲ್ಲಿ ವೈದ್ಯಕೀಯ ಚಿಕಿತ್ಸೆ ಸುಲಭವಾಗಿದೆ. ಆದರೆ ಆ ಸವಲತ್ತುಗಳಿಗೆ ಎಲ್ಲರಿಗೂ ಪ್ರವೇಶ ಸಾಧ್ಯವಾಗುತ್ತಿಲ್ಲ ಎಂಬುದೂ ಅಷ್ಟೇ ಸತ್ಯ, ನಮ್ಮ ನೆರವಿನ ಮೊತ್ತದಲ್ಲಿ ದೊಡ್ಡ ಭಾಗ ಇದಕ್ಕೆ ಮೀಸಲಾಗಿದೆ. ಆಧುನಿಕ ಚಿಕಿತ್ಸೆಯ ಪ್ರಜಾಪ್ರಭುತ್ವೀಕರಣದ ನಿಟ್ಟಿನಲ್ಲಿ ನಮ್ಮದೊಂದು ಕಿರು ಹೆಜ್ಜೆ ಎಂದು ನಾವು ಪ್ರಾಮಾಣಿಕವಾಗಿ ಮತ್ತು ನಮ್ಯತೆಯಿಂದ ಭಾವಿಸುತ್ತೇವೆ. ಈ ಯೋಜನೆಯನ್ನು ಆರಂಭ ಮಾಡಿದ ಮೊದಲ ವರ್ಷ ಒಟ್ಟು 1.25 ಕೋ.ರೂ. ನೆರವು ವಿತರಿಸಿದ್ದೇವೆ. ಆಗ 28 ಸಂಘ ಸಂಸ್ಥೆಗಳು ಪ್ರಯೋಜನ ಪಡೆದಿವೆ. ಈಗ 7ನೇ ವರ್ಷದಲ್ಲಿ 100ಕ್ಕೂ ಅಧಿಕ ಸಂಘ ಸಂಸ್ಥೆಗಳಿಗೆ ನೆರವು ವಿತರಣೆಯಾಗಲಿದೆ“ ಎಂದರು.


ಬಳಿಕ ಮಾತಾಡಿದ ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಅವರು, ”ಹುಟ್ಟುವಾಗ ಹೆಸರು ಇರುವುದಿಲ್ಲ ಉಸಿರು ಮಾತ್ರ ಇರುತ್ತದೆ. ಹೋಗುವಾಗ ಉಸಿರು ಇರುವುದಿಲ್ಲ ಹೆಸರು ಮಾತ್ರ ಉಳಿಯುತ್ತದೆ ಅನ್ನುವ ಮಾತಿನಂತೆ ಎಂ.ಆರ್.ಜಿ. ಗ್ರೂಪ್ ಒಂದು ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಿಕೊಂಡು ಬಂದಿದೆ. ಬದುಕು ಬೆಲೆ ಕಟ್ಟಲಾರದ ಮಾಣಿಕ್ಯ ಅದರಲ್ಲಿ ಶಾಂತಿ ಸಹಬಾಳ್ವೆ ಪ್ರೀತಿ ವಿಶ್ವಾಸದಿಂದ ಬದುಕಬೇಕು ಪ್ರಕಾಶ್ ಶೆಟ್ಟಿಯವರ ಬದುಕು ನಮಗೆಲ್ಲರಿಗೂ ಆದರ್ಶವಾಗಬೇಕು. ಮಾನವೀಯ ಮೌಲ್ಯಗಳನ್ನು ಇಂದಿನ ಯುವಪೀಳಿಗೆ ಮತ್ತು ಮುಂದಿನ ಸಮುದಾಯಕ್ಕೆ ವರ್ಗಾಯಿಸುವ ಬಲುದೊಡ್ಡ ಜವಾಬ್ದಾರಿ ನಮ್ಮೆಲ್ಲರದ್ದಾಗಬೇಕು. ಎಲ್ಲ ಜಾತಿ ಎಲ್ಲ ಸಮುದಾಯದ ಜನರನ್ನು ಒಂದೆಡೆ ಸೇರಿಸಿ ನೊಂದ ಶೋಷಿತ ಜನರ ಜೊತೆ ನಾನಿದ್ದೇನೆ ಎನ್ನುವ ಪ್ರಕಾಶ್ ಶೆಟ್ಟಿಯವರ ಮನೋಬಲಕ್ಕೆ ನಾವೆಲ್ಲರೂ ಬೆಂಬಲ ನೀಡಬೇಕಿದೆ. ಸಾಮರಸ್ಯ ಮತ್ತು ಶಾಂತಿಯುತ ಸಮಾಜದ ನಿರ್ಮಾಣವಾಗಬೇಕು ಇದಕ್ಕಾಗಿ ನಾವೆಲ್ಲರೂ ಶ್ರಮಪಡಬೇಕು“ ಎಂದರು.
ವೇದಿಕೆಯಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್, ಆಶಾ ಪ್ರಕಾಶ್ ಶೆಟ್ಟಿ, ಮೂಡಬಿದ್ರೆಯ ಅಳ್ವಾಸ್ ಎಜುಕೇಷನ್ ಟ್ರಸ್ಟ್‌ ಅಧ್ಯಕ್ಷ ಡಾ.ಮೋಹನ್ ಆಳ್ವ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಎಂ.ಆರ್.ಜಿ.ಗ್ರೂಪ್ ಆಡಳಿತ ನಿರ್ದೇಶಕ ಗೌರವ್ ಪಿ.ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಗುರುಪುರ ವಜ್ರದೇಹಿ ಸ್ವಾಮೀಜಿ, ಸಂಸದ ಬ್ರಿಜೇಶ್ ಚೌಟ, ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ಭರತ್ ವೈ.ಶೆಟ್ಟಿ, ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ ಕಾಮತ್, ದೇವಾನಂದ ಶೆಟ್ಟಿ ಹಾಜರಿದ್ದರು.
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಪ್ರಾಸ್ತಾವಿಕ ಮಾತನ್ನಾಡಿ ಅತಿಥಿಗಳನ್ನು ಸ್ವಾಗತಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಸುಮಾರು 4000 ಕುಟುಂಬಗಳು ಹಾಗು 100ಕ್ಕೂ ಅಧಿಕ ಸಂಘ ಸಂಸ್ಥೆಗಳಿಗೆ ಒಟ್ಟು ರೂಪಾಯಿ 9.5 ಕೋಟಿಗೂ ಅಧಿಕ ಮೊತ್ತದ ನೆರವು ವಿತರಣೆ ಮಾಡಲಾಯಿತು.
ದಾಮೋದರ ಶರ್ಮಾ, ನಿತೇಶ್ ಎಕ್ಕಾರ್ ಕಾರ್ಯಕ್ರಮ ನಿರೂಪಿಸಿದರು. ಸಮೀಕ್ಷಾ ಶೆಟ್ಟಿ ಧನ್ಯವಾದ ಸಮರ್ಪಿಸಿದರು.

About The Author

Leave a Reply

Your email address will not be published. Required fields are marked *