ಪುತ್ತೂರು:ಅಪ್ರಾಪ್ತ ಮುಸ್ಲಿಂ ವಿದ್ಯಾರ್ಥಿನಿಗೆ ಚೂರಿ ಇರಿದ ಹಿಂದೂ ಅಪ್ರಾಪ್ತ!
ಪುತ್ತೂರು ತಾಲೂಕಿನ ಕೊಂಬೆಟ್ಟು ಕಾಲೇಜಿನಲ್ಲಿ ಅಪ್ರಾಪ್ತ ಮುಸ್ಲಿಂ ವಿದ್ಯಾರ್ಥಿನಿ ಮೇಲೆ ಹಿಂದೂ ಅಪ್ರಾಪ್ತ ಬಾಲಕ ಚೂರಿ ಇರಿದ ಘಟನೆ ನಡೆದಿದೆ. ಒನ್‌ಸೈಡ್ ಲವ್ ಹಿನ್ನೆಲೆಯಲ್ಲಿ ಈ ದಾಳಿ ನಡೆದಿರಬಹುದು ಎಂದು ಶಂಕಿಸಲಾಗಿದೆ.
ಮುಸ್ಲಿಂ ವಿದ್ಯಾರ್ಥಿನಿಗೆ ಹಿಂದೂ ವಿದ್ಯಾರ್ಥಿ ಚೂರಿ ಇರಿದಿದ್ದು, ಕೈಗೆ ಗಾಯವಾಗಿದೆ. ಇಬ್ಬರೂ ಕೂಡ ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿಗೆ ಸೇರಿದ ವಿದ್ಯಾರ್ಥಿಗಳು. ಚೂರಿಯಿಂದ ದಾಳಿ ಮಾಡಿದ ಆರೋಪದ ಹಿನ್ನೆಲೆ, ಅಪ್ರಾಪ್ತ ವಿದ್ಯಾರ್ಥಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸದ್ಯ ಮುಸ್ಲಿಂ ವಿದ್ಯಾರ್ಥಿನಿಯನ್ನು ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಇದೆಲ್ಲದರ ನಡುವೆ ಆಸ್ಪತ್ರೆಯಲ್ಲಿ ಹೆಸರು ಬದಲಾಯಿಸಿ ಹೇಳುವಂತೆ ಶಿಕ್ಷಕಿ ಒತ್ತಡ ಹೇರಿದ್ದಾರೆ ಎಂದು ಬಾಲಕಿ ಆರೋಪಿಸಿದ್ದಾಳೆ. ಕೈಗೆ ಗಾಜು ತಾಗಿ ಗಾಯವಾಗಿದೆ ಎಂದು ಹೇಳಲು ಒತ್ತಾಯಿಸಿದ್ದಾರೆ ಎಂದು ಬಾಲಕಿ ಆರೋಪಿಸಿದ್ದಾಳೆ.
ಆಸ್ಪತ್ರೆಯ ಮುಂದೆ ಜನ ಸೇರಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ಜನರನ್ನು ಆಸ್ಪತ್ರೆಯಿಂದ ಹೊರಗೆ ಪೋಲೀಸರು ಕಳುಹಿಸಿದ್ದಾರೆ. ಕೈಗೆ ಗಾಜು ತಾಗಿದ್ದಕ್ಕೆ ಕಾಲೇಜು ಪ್ರಾಂಶುಪಾಲರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದಿದ್ದಾರೆ. ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರಿಂದ ತನಿಖೆ ನಡೆಯುತ್ತಿದೆ.
ಆಸ್ಪತ್ರೆಯಲ್ಲಿ ವಿದ್ಯಾರ್ಥಿನಿ ಹೇಳಿಕೆ: ವಿಜಯ (ಹೆಸರು ಬದಲಿಸಲಾಗಿದೆ) ನನ್ನನ್ನ ಕಾಲೇಜು ಬಳಿ ಫಾಲೋ ಮಾಡಿಕೊಂಡು ಬಂದ. ನನ್ನ ಬಳಿ ಬಂದು ನೀನು ಜಾಜಿಯ (ಹೆಸರು ಬದಲಿಸಲಾಗಿದೆ) ಗೆಳತಿ ಅಲ್ವಾ ಅಂತ ಕೇಳಿದ. ಅಲ್ಲದೇ ನಾನು ಜಾಜಿಯನ್ನು ಲವ್ ಮಾಡಲ್ಲ, ನಿನ್ನನ್ನು ಲವ್ ಮಾಡ್ತೇನೆ ಅಂದ. ಆಗ ನಾನು ಅವನಿಗೆ ಸರಿಯಾಗಿ ಬೈದಾಗಲೂ ಮತ್ತೆ ಮತ್ತೆ ಲವ್ ಮಾಡ್ತೇನೆ ಅಂದ. ಅಗ ನಾನು ವಿರೋಧಿಸಿದ್ದಕ್ಕೆ ನನ್ನ ಕೈಗೆ ಇರಿದು ಓಡಿ ಹೋದ. ಯಾವುದರಲ್ಲಿ ಇರಿದ ಗೊತ್ತಾಗಿಲ್ಲ, ಬಹುಶಃ ಬ್ಲೇಡ್ ನಲ್ಲಿ ಇರಬಹುದು. ಬೆಳಿಗ್ಗೆ ಒಂದು 8.45 ಗಂಟೆಗೆ ಈ ಘಟನೆ ನಡೆದಿದೆ. ಅವನು ಪ್ರಥಮ ಪಿಯುಸಿ ಆರ್ಟ್ಸ್ ವಿದ್ಯಾರ್ಥಿ, ನಾನು ಕಾಮರ್ಸ್ ವಿದ್ಯಾರ್ಥಿನಿ. ಅವನು ಬರುವಾಗ ಜೊತೆಗೆ ಜನ ಇದ್ದರು, ಆದರೆ ನನ್ನ ಬಳಿ ಅವನು ಒಬ್ಬನೇ ಬಂದಿದ್ದಾನೆ ಎಂದಿದ್ದಾಳೆ.
ವಿದ್ಯಾರ್ಥಿನಿ ಮೇಲಿನ ಚೂರಿ ಇರಿತ ಕೇಸ್ ಮುಚ್ಚಿ ಹಾಕಲು ಯತ್ನಿಸಿದ್ರಾ ಪ್ರಾಂಶುಪಾಲರು?
ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರಿನ ಕೊಂಬೆಟ್ಟು ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರ ವಿರುದ್ದ ಆಕ್ರೋಶ ವ್ಯಕ್ತವಾಗಿದೆ. ಆಸ್ಪತ್ರೆ ಮುಂಭಾಗ ಕಾಲೇಜಿನ ವಿರುದ್ದ ವಿದ್ಯಾರ್ಥಿ ಸಂಘಟನೆಗಳು ಕಾಲೇಜಿನ ಪ್ರಾಂಶುಪಾಲರು, ಶಿಕ್ಷಕರ ವಿರುದ್ದ ಪ್ರಕರಣ ದಾಖಲಿಸಲು ಒತ್ತಾಯಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಸ್ಪತ್ರೆ ಮಂಭಾಗ ಎನ್ ಎಸ್ ಯುಐ ಹಾಗೂ ಸಾರ್ವಜನಿಕರ ಆಕ್ರೋಶ. ಚೂರಿ ಇರಿದಿದ್ದನ್ನ ಗಾಜು ತಾಗಿದ್ದು ಅಂತ ಹೇಳಿ ಮುಚ್ಚಿ ಹಾಕಲು ಯತ್ನಿಸಿದ್ದಾರೆ. ಕಾಲೇಜು ಪ್ರಮುಖರ ವಿರುದ್ದವೂ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು. ಮತ್ತೆ ಯಾವ ಕಾಲೇಜಿನಲ್ಲೂ ಇಂತಹ ಘಟನೆ ನಡೆಯಬಾರದು ಅಂತ ಆಕ್ರೋಶ ವ್ಯಕ್ತವಾಗಿದೆ. ಸದ್ಯ ಪೊಲೀಸರ ಭರವಸೆ ಹಿನ್ನೆಲೆ ಆಕ್ರೋಶಿತರು ತೆರಳಿದ್ದಾರೆ. ಪ್ರಕರಣದ ಕೂಲಂಕುಷ ತನಿಖೆಗೆ ಪೊಲೀಸರು ಮುಂದಾಗಿದ್ದಾರೆ.