ಶವ ಸಂಭೋಗ; ಶಿಕ್ಷೆಗೆ ಕಾನೂನು ತಿದ್ದುಪಡಿಗೆ ಹೈಕೋರ್ಟ್ ಆದೇಶ

Karnataka
oi-Gururaj S
By ಎಸ್‌ಎಸ್‌ಎಸ್
| Updated: Thursday, June 1, 2023, 9:30 [IST]
ಬೆಂಗಳೂರು, ಜೂನ್ 01: ಮೃತದೇಹಗಳ ಮೇಲೆ ಸಂಭೋಗ ನಡೆಸುವವರಿಗೆ ಅತ್ಯಾಚಾರ ಪ್ರಕರಣದಡಿ ಶಿಕ್ಷೆ ವಿಧಿಸುವ ಅವಕಾಶವಿಲ್ಲದ ಹಿನ್ನೆಲೆಯಲ್ಲಿ ಅಂತಹ ಅಪರಾಧ ಎಸಗಿದವರಿಗೆ ಸೂಕ್ತ ಶಿಕ್ಷೆ ವಿಧಿಸಲು ಕಾನೂನಿಗೆ ತಿದ್ದುಪಡಿ ಮಾಡುವಂತೆ ಕರ್ನಾಟಕ ಹೈಕೋರ್ಟ್ ಆದೇಶಿಸಿದೆ. ಅಲ್ಲದೇ, ಶವಾಗಾರಗಳಿಗೆ ಸಿಸಿಟಿವಿ ಅಳವಡಿಸುವಂತೆ ನ್ಯಾಯಾಲಯ ನಿರ್ದೇಶನ ನೀಡಿದೆ.
ಮೃತರ ಮೇಲೆ ಅತ್ಯಾಚಾರ ನಡೆಸುವುದೂ ಸಹ ಗಂಭೀರ ಅಪರಾಧ, ಅಂತಹವರಿಗೆ ಶಿಕ್ಷೆ ಅಗುವ ರೀತಿಯಲ್ಲಿ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 377ಕ್ಕೆ (ಅಸ್ವಾಭಾವಿಕ ಅಪರಾಧಗಳು) ತಿದ್ದುಪಡಿ ಮಾಡಬೇಕು ಅಥವಾ ಹೊಸ ನಿಬಂಧನೆ ರೂಪಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ಶಿಫಾರಸು ಮಾಡಿದೆ.
ಯುವತಿಯೊಬ್ಬಳನ್ನು ಹತ್ಯೆಗೈದು, ಆಕೆಯ ಮೃತದೇಹದ ಜೊತೆ ಸಂಭೋಗ ನಡೆಸಿದ ಹಿನ್ನೆಲೆಯಲ್ಲಿ ಅಧೀನ ನ್ಯಾಯಾಲಯ ತನಗೆ ಶಿಕ್ಷೆ ವಿಧಿಸಿರುವುದನ್ನು ಪ್ರಶ್ನಿಸಿ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಗುಳಿಗೇನಹಳ್ಳಿಯ ರಂಗರಾಜು ಅಲಿಯಾಸ್ ವಾಜಪೇಯಿ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ. ವೀರಪ್ಪ ನೇತೃತ್ವದ ವಿಭಾಗೀಯ ಪೀಠ ಈ ಶಿಫಾರಸ್ಸು ಮಾಡಿದೆ.
ಯುವತಿಯನ್ನು ರಂಗರಾಜು ಕೊಲೆ ಮಾಡಿರುವುದನ್ನು ಪ್ರಾಸಿಕ್ಯೂಷನ್ ಸಂಶಯಾತೀತವಾಗಿ ಸಾಬೀತುಪಡಿಸಿದೆ. ಇದರಿಂದ ಕೊಲೆ ಪ್ರಕರಣಕ್ಕೆ ಅಧೀನ ನ್ಯಾಯಾಲಯ ವಿಧಿಸಿರುವ ಜೀವಾವಧಿ ಶಿಕ್ಷೆಯನ್ನು ಕಾಯಂಗೊಳಿಸಲಾಗುತ್ತಿದೆ. ಆದರೆ, ಐಪಿಸಿ ಸೆಕ್ಷನ್ 375 ಮತ್ತು 376 ರಲ್ಲಿ ಮೃತದ ದೇಹವನ್ನು ಮನುಷ್ಯ ಅಥವಾ ವ್ಯಕ್ತಿಯಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂಬುದಾಗಿ ಸ್ಪಷ್ಟವಾಗಿ ಹೇಳಿದೆ.
ಆದ್ದರಿಂದ ಈ ಪ್ರಕರಣದಲ್ಲಿ ರಂಗರಾಜುಗೆ ಅತ್ಯಾಚಾರ ಪ್ರಕರಣ ಅನ್ವಯಿಸುವುದಿಲ್ಲ. ಈ ಪ್ರಕರಣವನ್ನು ಕ್ರೌರ್ಯರತಿ (ಸ್ಯಾಡಿಸಂ) ಮತ್ತು ಶವಗಳ ಮೇಲಿನ ಸಂಭೋಗ (ನೆಕ್ರೋಫಿಲಿಯಾ) ಎಂಬುದಾಗಿ ಪರಿಗಣಿಸಬೇಕಾಗುತ್ತದೆ. ಹಾಗಾಗಿ, ಯುವತಿಯ ಮೃತದೇಹದ ಜೊತಗೆ ಸಂಭೋಗ ನಡೆಸಿರುವುದಕ್ಕೆ ಅತ್ಯಾಚಾರ ಅಪರಾಧ (ಐಪಿಸಿ ಸೆಕ್ಷನ್ 376) ಅಡಿ ವಿಧಿಸಲಾಗಿದ್ದ 10 ವರ್ಷ ಜೈಲು ಶಿಕ್ಷೆಯನ್ನು ರದ್ದುಪಡಿಸಲಾಗುತ್ತಿದೆ ಎಂದು ಆದೇಶದಲ್ಲಿ ಹೈಕೋರ್ಟ್ ತಿಳಿಸಿದೆ.
ಇತರೆ ದೇಶಗಳ ಕಾನೂನು ಉಲ್ಲೇಖ: ಮೃತದೇಹದ ಮೇಲೆ ಸಂಭೋಗ ನಡೆಸಿದಂತಹ ಪ್ರಕರಣದಲ್ಲಿ ಅತ್ಯಾಚಾರ ಅಪರಾಧದಡಿ ಅಪರಾಧಿಗೆ ಶಿಕ್ಷೆ ವಿಧಿಸಲು ಯಾವುದೇ ನಿಯಮಗಳು ಇಲ್ಲವಾಗಿದೆ. ಐಪಿಸಿ ಸೆಕ್ಷನ್ 377 ಅಡಿಯಲ್ಲಿ ಪುರುಷ, ಮಹಿಳೆ ಅಥವಾ ಪ್ರಾಣಿಗಳ ಮೇಲೆ ಅಸ್ವಾಭಾವಿಕವಾಗಿ ಲೈಂಗಿಕ ಕ್ರಿಯೆ ನಡೆಸಿದರೆ, ಗರಿಷ್ಠ 10 ವರ್ಷ ಜೈಲು ಶಿಕ್ಷೆ ವಿಧಿಸುವುದಕ್ಕೆ ಅವಕಾಶವಿದೆ. ಈ ಸೆಕ್ಷನ್‌ಗೆ ತಿದ್ದುಪಡಿ ತಂದು ಪುರುಷ, ಮಹಿಳೆ ಅಥವಾ ಪ್ರಾಣಿಗಳ ಮೃತದೇಹ ಎಂಬುದಾಗಿ ಸೇರಿಸುವುದಕ್ಕೆ ಇದು ಸಕಾಲವಾಗಿದೆ ಇಲ್ಲವೇ, ಇಂತಹ ಅಪರಾಧಗಳಿಗೆ ಶಿಕ್ಷೆ ವಿಧಿಸಲು ಅನುಕೂಲವಾಗುವಂತೆ ಐಪಿಸಿಯಲ್ಲಿ ಹೊಸ ನಿಯಮವನ್ನು ರೂಪಿಸಬೇಕು ಎಂದು ಹೇಳಿದೆ.
ಕೆನಡಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ಸೇರಿದಂತೆ ಹಲವಾರು ದೇಶಗಳಲ್ಲಿ ಮಹಿಳೆಯ ಮೃತದೇಹದ ಮೇಲೆ ಎಸಗುವ ಅಪರಾಧವು ಶಿಕ್ಷಾರ್ಹವಾಗಿದೆ. ಅಂತಹ ನಿಯಮಗಳನ್ನು ಭಾರತದಲ್ಲಿಯೂ ಪರಿಚಯಿಸಬೇಕಿದೆ. ಕೇಂದ್ರ ಸರ್ಕಾರವು ಈ ದಿಸೆಯಲ್ಲಿ ಆರು ತಿಂಗಳ ಒಳಗೆ ಅಗತ್ಯ ಕ್ರಮ ಜರುಗಿಸಬೇಕು ಎಂದು ನ್ಯಾಯಪೀಠ ಆದೇಶದಲ್ಲಿ ಶಿಫಾರಸು ಮಾಡಿದೆ.
ಈ ಆದೇಶದ ಪ್ರತಿಯನ್ನು ಕೇಂದ್ರ ಗೃಹ ಸಚಿವಾಲಯ, ಕಾನೂನು, ನ್ಯಾಯ ಮತ್ತು ಸಂಸದೀಯ ವ್ಯವಹಾರಗಳ ಸಚಿವಾಲಯ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ರಾಜ್ಯ ಆರೋಗ್ಯ, ಕುಟುಂಬ ಕಲ್ಯಾಣ ಪ್ರಧಾನ ಕಾರ್ಯದರ್ಶಿಗೆ ರವಾನಿಸಬೇಕು ಎಂದು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್‌ಗೆ ನ್ಯಾಯಪೀಠ ನಿರ್ದೇಶಿಸಿದೆ.
ರಾಜ್ಯ ಸರ್ಕಾರಕ್ಕೆ ಶಿಫಾರಸುಗಳು: ಆಸ್ಪತ್ರೆಯ ಶವಗಾರಗಳಲ್ಲಿ ಸುಂದರ ಹೆಣ್ಣುಮಕ್ಕಳ ಶವ ಇದ್ದರೆ, ಅವುಗಳ ಮೇಲೆ ಅಲ್ಲಿನ ಸಿಬ್ಬಂದಿ ಅತ್ಯಾಚಾರ ನಡೆಸುತ್ತಾರೆ ಎಂಬ ಮಾಹಿತಿ ನ್ಯಾಯಾಲಯದ ಗಮನಕ್ಕೆ ಬಂದಿದೆ. ಹಾಗಾಗಿ, ಮಹಿಳೆಯ ಮೃತದೇಹದ ಮೇಲೆ ನಡೆಯುವ ಅಪರಾಧಗಳನ್ನು ತಡೆಯುವ ನಿಟ್ಟಿನಲ್ಲಿ ಆರು ತಿಂಗಳಲ್ಲಿ ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಶವಗಾರಗಳಲ್ಲಿ ಸಿಸಿಟಿವಿ ಅಳವಡಿಸಬೇಕು. ಶವಗಾರಗಳಲ್ಲಿ ನೈರ್ಮಲ್ಯ ಕಾಪಾಡಬೇಕು.ಭಾರತೀಯ ಸಾರ್ವಜನಿಕ ಪ್ರಮಾಣಿಕೃತ ಮಾನದಂಡಗಳ (ಐಎಸ್‌ಐ) ಪ್ರಕಾರ ಶವ ನಿರ್ವಹಣೆಗೆ ಅಗತ್ಯವಿರುವ ಮೂಲ ಸೌಕರ್ಯಗಳನ್ನು ಒದಗಿಸಬೇಕು ಎಂದು ಹೇಳಿದೆ.
ಪ್ರಕರಣದ ಹಿನ್ನೆಲೆ: ತುಮಕೂರು ಜಿಲ್ಲೆ ಶಿರಾ ತಾಲೂಕಿನಲ್ಲಿ ಗುಳಿಗೇನಹಳ್ಳಿಯ 21 ವರ್ಷದ ಯುವತಿಯನ್ನು ಅದೇ ಗ್ರಾಮದ ರಂಗರಾಜು (ಅಪರಾಧಿ) 2015ರ ಜೂ.25ರಂದು ಕತ್ತುಸೀಳಿ ಕೊಲೆ ಮಾಡಿದ್ದ. ಇದಾದ ಬಳಿಕ ಸಂತ್ರಸ್ತೆ ಮೃತ ದೇಹದ ಜೊತೆಗೆ ಸಂಭೋಗ ನಡೆಸಿದ್ದ. ಸಂತ್ರಸ್ತೆಯ ಸಹೋದರ ನೀಡಿದ ದೂರನ್ನು ಪರಿಗಣಿಸಿ ಘಟನೆ ನಡೆದ ಏಳು ದಿನಗಳ ಬಳಿಕ ರಂಗರಾಜುನನ್ನು ಪೊಲೀಸರು ಬಂಧಿಸಿದ್ದರು.
ತನಿಖೆ ನಡೆಸಿದ್ದ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದರು. ಅಧೀನ ನ್ಯಾಯಾಲಯವು ಕೊಲೆ ಪ್ರಕರಣಕ್ಕೆ ಜೀವಾವಧಿ ಶಿಕ್ಷೆ ಮತ್ತು 50 ಸಾವಿರ ರೂ. ದಂಡ, ಅತ್ಯಾಚಾರ ಪ್ರಕರಣಕ್ಕೆ 10 ವರ್ಷ ಜೈಲು ಶಿಕ್ಷೆ ಮತ್ತು 25 ಸಾವಿರ ರೂ. ದಂಡ ವಿಧಿಸಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿದ್ದ ರಂಗರಾಜು ಹೈಕೋರ್ಟ್‌ಗೆ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿದ್ದ.
Oneindia ಬ್ರೇಕಿಂಗ್ ನ್ಯೂಸ್ . ಇಡೀ ದಿನ ತಾಜಾ ಸುದ್ದಿಗಳ ಪಡೆಯಿರಿ.
Allow Notifications
You have already subscribed
English summary
Sexual assault on dead body. Karnataka High Court directed to amend IPC for conviction of such offenders.